ಟ್ಯಾಫ್ಟ್, ವಿಲಿಯಮ್ ಹೌವರ್ಡ್
1857-1930. ಅಮೆರಿಕ ಸಂಯುಕ್ತಸಂಸ್ಥಾನಗಳ 27ನೆಯ ಅಧ್ಯಕ್ಷ (1908-13) ; ಅಲ್ಲಿಯ ಹತ್ತನೆಯ ಮುಖ್ಯ ನ್ಯಾಯಧೀಶ (1921-30)-1857ರ ಸೆಪ್ಟೆಂಬರ್ 15ರಂದು ಹ್ಯಾಮಿಲ್ಟನ್ ಕೌಂಟಿಯಲ್ಲಿರುವ ಸಿನ್‍ಸಿ ನ್ಯಾಟಿಯಲ್ಲಿ ಜನಿಸಿದರು. ತಂದೆ ಆಲ್ಫಾನ್ಸೋ ಟ್ಯಾಫ್ಟ್, ಅಧ್ಯಕ್ಷ ಯು. ಎಸ್.ಗ್ರ್ಯಾಂಟರ ಸಂಪುಟದಲ್ಲಿ ಅಟಾರ್ನಿ ಜನರಲ್ ಆಗಿದ್ದರಲ್ಲದೆ ಆಸ್ಟ್ರಿಯ (1882-84) ಹಾಗೂ ರಷ್ಯದಲ್ಲಿ (1884-85) ರಾಯಭಾರಿಯಾಗೂ ಇದ್ದರು.

ಟ್ಯಾಫ್ಟ್ ಯೇಲ್ ಕಾಲೇಜಿನಿಂದ 1878ರಲ್ಲಿ ಪದವಿ ಪಡೆದರು. ಅನಂತರ 1880ರಲ್ಲಿ ಸಿನ್‍ಸಿನ್ಯಾಟಿಯ ನ್ಯಾಯಶಾಸ್ತ್ರ ಕಾಲೇಜಿನಲ್ಲಿ ಶಿಕ್ಷಣ ಪಡೆದು ಒಹಾಯೊದಲ್ಲಿ ವಕೀಲರಾದರು. 1881ರಲ್ಲಿ ಹ್ಯಾಮಿಲ್ಟನ್ ಕೌಂಟಿಯ ಸಹಾಯಕ ಪ್ರಾಸೆಕ್ಯೂಟಿಂಗ್ ಅಟಾರ್ನಿಯಾಗಿ ನೇಮಕವಾದರು. 1882ರಲ್ಲಿ ಒಹಾಯೋರಾಜ್ಯದ ಮೊದಲ ಜಿಲ್ಲೆಯಲ್ಲಿ ಆಂತರಿಕ ಕಂದಾಯ ವಸೂಲಿಯ ಮುಖ್ಯಾಧಿಕಾರಿಯಾಗಿ ನೇಮಕಗೊಂಡರು.

1883ರಲ್ಲಿ ವಕೀಲ ವೃತ್ತಿಗೆ ಹಿಂದಿರುಗಿದರು. 1885-1887ರಲ್ಲಿ ಹ್ಯಾಮಿಲ್ಟನ್ ಕೌಂಟಿಯ ಸಹಾಯಕ ಸಲಹೆ ವಕೀಲರಾಗಿ (ಸೊಲಿಸಿಟರ್) ಸೇವೆ ಸಲ್ಲಿಸಿದರು. ಅನಂತರ ಒಹಾಯೋದ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. 1890ರಲ್ಲಿ ಅಧ್ಯಕ್ಷ ಬೆಂಜಮಿನ್ ಹ್ಯಾರಿಸನ್ ಇವರನ್ನು ಸಂಯುಕ್ತಸಂಸ್ಥಾನಗಳ ಮಹಾ ಸಲಹೆವಕೀಲರಾಗಿ ನೇಮಿಸಿದ. 1892ರಲ್ಲಿ ಸಂಯುಕ್ತಸಂಸ್ಥಾನದ ಸಂಚಾರಿ ನ್ಯಾಯಧೀಶರಾಗಿ (ಸರ್ಕಿಟ್ ಜಜ್) ನೇಮಕಗೊಂಡರು. 1896-1900ರ ಅವಧಿಯಲ್ಲಿ ಸಿನ್‍ಸಿನ್ಯಾಟಿ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಇಲಾಖೆಯ ಪ್ರಾಧ್ಯಾಪಕರಾಗಿಯೂ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು.

ಅಧ್ಯಕ್ಷ ವಿಲಿಯಮ್ ಮೆಕಿನ್ಲಿ ಇವರನ್ನು 1900 ರಲ್ಲಿ ಫಿಲಿಪೀನ್ ಆಯೋಗದ ಅಧ್ಯಕ್ಷರಾಗಿ ನೇಮಿಸಿದರು. 1901ರಿಂದ 1904ರ ವರೆಗೆ ಅಲ್ಲಿ ಗವರ್ನರ್-ಜನರಲ್ ಆಗಿದ್ದರು.
1904ರ ಫೆಬ್ರವರಿಯಲ್ಲಿ ಸಂಯುಕ್ತಸಂಸ್ಥಾನಗಳ ಸಮರ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. 1906ರ ಸೆಪ್ಟೆಂಬರಿನಲ್ಲಿ ಕ್ಯೂಬ ಸರ್ಕಾರದ ಪತನವಾದಾಗ ಅಲ್ಲಿಯ ವ್ಯವಹಾರಗಳನ್ನು ತಾತ್ಕಾಲಿಕವಾಗಿ ನೋಡಿಕೊಂಡರು. ಇವರು ಸಮರ ಮಂತ್ರಿಯಾಗಿದ್ದಾಗಲೇ ಪನಾಮಾ ಕಾಲುವೆಯ ಕೆಲಸ ತ್ವರಿತಗೊಳ್ಳುವಂತೆ ಮಾಡಿದ್ದರಿಂದ ಕಾಲುವೆ 1913ರಲ್ಲಿ ಸಂಚಾರಕ್ಕೆ ಬಿಡುಗಡೆಯಾಯಿತು.

ಅಧ್ಯಕ್ಷ ರೂಸ್ವೆಲ್ಟರಿಗೆ ಇವರಲ್ಲಿ ಹೆಚ್ಚಿನ ವಿಶ್ವಾಸವಿತ್ತು. ಆದ್ದರಿಂದಲೇ ಟ್ಯಾಫ್ಟರನ್ನು ತಮ್ಮ ಉತ್ತರಾಧಿಕಾರಿಯಾಗಿ ಸೂಚಿಸಿದರು. 1908ರ ನವೆಂಬರ್ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಎದುರಾಳಿಯನ್ನು ಸೋಲಿಸಿ ಟ್ಯಾಫ್ಟ್ ಆಯ್ಕೆಯಾದರು. ಚುನಾವಣೆಗೆ ಮೊದಲು ಮಾಡಿದ ವಾಗ್ದಾನದಂತೆ ಟ್ಯಾಫ್ಟ್ ತೆರಿಗೆಗಳನ್ನು ಪರಿಷ್ಕರಿಸಲು ಶಾಸನಸಭೆಯ ವಿಶೇಷ ಅಧಿವೇಶನವನ್ನು ಏರ್ಪಡಿಸಿದರು. ಈ ಅಧಿವೇಶವದಲ್ಲಿ ಸಂವಿಧಾನದ 16ನೆಯ ತಿದ್ದುಪಡಿ ವಿಧೇಯಕ ಅಂಗೀಕೃತವಾಯಿತು. ಲಾಭದಾಯಕ ಸಂಸ್ಥೆಗಳ ಲಾಭದ ಮೇಲೆ ನಿಯಮಿತ ವಿಶೇಷ ಸುಂಕವನ್ನು ವಿಧಿಸಿ ದೇಶದ ಆದಾಯದಲ್ಲಿ ಉಂಟಾದ ಕೊರತೆಯನ್ನು ಸರಿದೂಗಿಸಿದರು.

ಅಮೆರಿಕದ ಸಂಯುಕ್ತಸಂಸ್ಥಾನಗಳಂಥ ದೊಡ್ಡ ರಾಷ್ಟ್ರದಲ್ಲಿ ವಾರ್ಷಿಕ ಆಯವ್ಯಯದ ಅಂದಾಜುಪಟ್ಟಿಯ ಆವಶ್ಯಕತೆಯನ್ನು ಕಂಡು 1912ರಲ್ಲಿ ಅದನ್ನು ಜಾರಿಗೆ ತರಲು ಟ್ಯಾಫ್ಟ್ ಸೂಚಿಸಿದರು. ಇದಲ್ಲದೆ ಪ್ರಜೆಗಳ ಉಪಯೋಗಕ್ಕಾಗಿ ಅಂಚೇಕಚೇರಿಯ ಮೂಲಕ ಉಳಿತಾಯ ಯೋಜನೆ, ಸಾರ್ವಜನಿಕ ಆರೋಗ್ಯ ಇಲಾಖೆ-ಮುಂತಾದವನ್ನು ತೆರೆಯಲು ಶಿಫಾರಸು ಮಾಡಿದರು. ಚುನಾವಣಾ ಪ್ರಚಾರಕ್ಕೆ ಬಳಸುವ ಹಣದ ಸಾರ್ವಜನಿಕ ಘೋಷಣೆ, ಕೋರ್ಟುಗಳ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಳು, ಅರ್ಹತೆಯನ್ನನುಸರಿಸಿ ಕೆಲಸಕ್ಕೆ ನೇಮಕ ಮತ್ತು ಮುಂಬಡ್ತಿ, ಇಂಥ ಅನೇಕ ಸುಧಾರಣೆಗಳನ್ನು ಇವರು ಕಾಂಗ್ರೆsಸ್ಸಿಗೆ ಸೂಚಿಸಿದರು. ಇವರ ಬಹುಪಾಲು ಸೂಚನೆಗಳನ್ನು ಕಾಂಗ್ರೆಸ್ ಮನ್ನಿಸಿ ಅಡಚಣೆಗೆ ತಂದಿತು.

ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಶಾಂತ ರೀತಿಯಲ್ಲಿ ಪರಿಹರಿಸಲು ಟ್ಯಾಫ್ಟ್ 1910-11ರಲ್ಲಿ ಫ್ರಾನ್ಸ್, ಗ್ರೇಟ್ ಬ್ರಿಟನ್ ಮತ್ತು ಇತರ ಸರ್ಕಾರಗಳೊಡನೆ ಅನೇಕ ನ್ಯಾಯನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡರು. ಕೆನಡದ ಜೊತೆ ವ್ಯಾಪಾರ ನಡೆಸಲು ಇವರು ಬ್ರಿಟಿಷ್ ಸರ್ಕಾರದೊಡನೆ ಮಾಡಿಕೊಂಡ ಒಪ್ಪಂದಕ್ಕೆ ಕಾಂಗ್ರಸ್ಸಿನ ಪೂರ್ಣ ಬೆಂಬಲ ದೊರಕಿರಲಿಲ್ಲ.

ಟ್ಯಾಫ್ಟ್ ಪ್ರಧಾನವಾಗಿ ನ್ಯಾಯವಾದಿ, ರಾಜಕಾರಣಿಯಲ್ಲ. ಹಾಗಾಗಿ ರಾಜಕೀಯ ರಂಗದಲ್ಲಿ ಅನೇಕರನ್ನು ಎದುರು ಹಾಕಿಕೊಂಡರು. ಮಾಜಿ ಅಧ್ಯಕ್ಷ ರೂಸ್ವೆಲ್ಟರಿಗೆ ತುಂಬ ಬೇಕಾಗಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ಇವರು ಕೆಲಸದಿಂದ ತೆಗೆದುಹಾಕಿದರು. ಅವರು ರೂಸ್‍ವೆಲ್ಟರೊಡನೆ ಸೇರಿ ಟ್ಯಾಫ್ಟರ ವಿರುದ್ಧ ಚಳವಳಿ ಹೂಡಿದರು. ಮುಂದಿನ ಚುನಾವಣೆಯಲ್ಲಿ ಟ್ಯಾಫ್ಟ್ ಬಹಳ ಕಡಿಮೆ ಮತಗಳನ್ನು ಪಡೆದು ಸೋತರು. ಪಕ್ಷದ ಒಡಕಿನಿಂದಾಗಿ ಇವರ ದಕ್ಷ ಆಡಳಿತಕ್ಕೆ ಪುರಸ್ಕಾರ ದೊರಕಲಿಲ್ಲ.

ಅಧ್ಯಕ್ಷಸ್ಥಾನದಿಂದ ನಿವೃತ್ತರಾದ ಬಳಿಕ (1913) ಇವರು ಯೇಲ್‍ನಲ್ಲಿ ನ್ಯಾಯಶಾಸ್ತ್ರದ ಪ್ರಾಧ್ಯಾಪಕರಾದರು. ಅದೇ ವರ್ಷ ಅಮೆರಿಕನ್ ನ್ಯಾಯವಾದಿ ಸಂಘದ (ಬಾರ್ ಅಸೋಸಿಯೇಷನ್) ಅಧ್ಯಕ್ಷರಾದರು. ನ್ಯಾಯ ಮತ್ತು ನ್ಯಾಯ ಇಲಾಖೆಯ ಆಡಳಿತವನ್ನು ಉತ್ತಮಗೊಳಿಸಲು ಪ್ರಾರಂಭವಾದ ಅಮೆರಿಕನ್ ಇನ್ಸ್ಟಿಟ್ಯೂಟ್ ಜೂರಿಸ್‍ಪ್ರೂಡೆನ್ಸ್ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು (1914).

ಅಧ್ಯಕ್ಷ ವಿಲ್ಸನ್ ಟ್ಯಾಫ್ಟರನ್ನು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ನಿಯಮಿಸಿದ ಕಾರ್ಮಿಕರ ಮಂಡಳಿಯ ಸದಸ್ಯರಾಗಿ ನೇಮಿಸಿದರು (1918). 1921ರಲ್ಲಿ ಆಗಿನ ಮುಖ್ಯ ನ್ಯಾಯಧೀಶರಾಗಿದ್ದ ಎಡ್ವರ್ಡ್ ಹ್ವೈಟ್ ಮರಣ ಹೊಂದಿದಾಗ ಅಧ್ಯಕ್ಷ ಹಾರ್ಡಿಂಗ್ ಟ್ಯಾಫ್ಟರನ್ನು ಆ ಸ್ಥಾನಕ್ಕೆ ನೇಮಿಸಿದರು. 1930ರಲ್ಲಿ ಮರಣಹೊಂದುವ ವರೆಗೂ ಟ್ಯಾಫ್ಟ್ ಮುಖ್ಯ ನ್ಯಾಯಾಧೀಶರಾಗಿದ್ದರು.

ಟ್ಯಾಫ್ಟ್ ಲೇಖಕರೂ ಹೌದು. ಇವರು ಬರೆದದ್ದು ಬಹುಪಾಲು ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ್ದು. ಪಾಪ್ಯುಲರ್ ಗವರ್ನ್‍ಮೆಂಟ್, ಇಟ್ಸ್ ಎಸೆನ್ಸ್, ಇಟ್ಸ್ ಪರ್‍ಫಾರ್‍ಮೆನ್ಸ್ ಅಂಡ್ ಇಟ್ಸ್ ಪೆರಿಲ್ಸ್ (1913) ; ದಿ ಆ್ಯಂಟಿಟ್ರಸ್ಟ್ ಆ್ಯಕ್ಟ್ ಅಂಡ್ ದಿ ಸುಪ್ರಿಮ್ ಕೋರ್ಟ್ (1914)-ಇವು ಇವರ ಮುಖ್ಯಗ್ರಂಥಗಳು. ಇವಲ್ಲದೆ ಇವರು ಹಲವು ಕಡೆ ನೀಡಿದ ಉಪನ್ಯಾಸಗಳೂ ಗ್ರಂಥರೂಪದಲ್ಲಿ ಅಚ್ಚಾಗಿವೆ. ಎತಿಕ್ಸ್ ಇನ್ ಸರ್ವಿಸ್ (ಯೇಲ್ ಉಪನ್ಯಾಸಗಳು 1915), ಅವರ್ ಚೀಫ್ ಮ್ಯಾಜಿಸ್ಟ್ರೇಟ್ ಅಂಡ್ ಹಿಸ್ ಪವರ್ಸ್. (ಕೊಲಂಬಿಯ ಉಪನ್ಯಾಸಗಳು 1915), ದಿ ಪ್ರೆಸಿಡೆನ್ಸಿ, ಇಟ್ಸ್ ಡ್ಯೂಟೀಸ್, ಇಟ್ಸ್ ಪವರ್ಸ್, ಇಟ್ಸ್ ಆಪರ್ಚುನಿಟೀಸ್ ಅಂಡ್ ಇಟ್ಸ್ ಲಿಮಿಟೇಷನ್ಸ್ (ವರ್ಜಿನಿಯ ವಿಶ್ವವಿದ್ಯಾಲಯ ಉಪನ್ಯಾಸಗಳು 1916)- ಇವು ಪ್ರಮುಖ ಉಪನ್ಯಾಸ ಸಂಕಲನಗಳು.		  (ಕೆ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ